ಕೇಂದ್ರ
 
ನಡುವಿನ ಬಿಂದು; ಸಂಧಿ ಬಿಂದು (ಸೆಂಟರ್).  ಉದಾಹರಣೆಗೆ ವೃತ್ತ ಕೇಂದ್ರ, ನರಕೇಂದ್ರ, ಗುರುತ್ವ ಕೇಂದ್ರ, ಪ್ಲವನ ಕೇಂದ್ರ, ಆಂದೋಳನಕೇಂದ್ರ ಮುಂತಾದವುಗಳಿಗೆ ಸಂಬಂಧಿಸಿದಂತೆ ಇಲ್ಲಿ ಕೇಂದ್ರ ಪದದ ವಿವರಣೆ ನೀಡಿದೆ.  

ಗುರುತ್ವ ಕೇಂದ್ರ : ಒಂದು ವಸ್ತು ಅಥವಾ ವಸ್ತುಗಳ ಒಂದು ವ್ಯವಸ್ಥೆಯಲ್ಲಿ ಅದರ ತೂಕ ವರ್ತಿಸುತ್ತದೆ ಎಂದು ಭಾಸವಾಗುವ ಒಂದು ಬಿಂದು (ಸೆಂಟರ್ ಆಫ್ ಗ್ರಾವಿಟಿ) ಎಂದರೆ, ಅದನ್ನು ಸರಿದೂಗಿಸಲು ಆಧಾರ ಕೊಡಬೇಕಾದ ಒಂದು ಬಿಂದು.  ಸಮತೂಕ ಬಿಂದು (ಪಾಯಿಂಟ್ ಆಫ್ ಬ್ಯಾಲೆನ್ಸ್) ಎಂದೂ ಸಹ ಕರೆಯುವುದುಂಟು.  ಜಡತ್ವ ಕೇಂದ್ರ (ಸೆಂಟರ್ ಆಫ್ ಇನರ್ಷಿಯ) ಎಂಬ ಹೆಸರು ಕೂಡ ಇದೆ.  

ದ್ರವ್ಯರಾಶಿ ಕೇಂದ್ರ : ಗಣನೆಯ ಸೌಕರ್ಯಕ್ಕೋಸ್ಕರ ಒಂದು ವಸ್ತು ಅಥವಾ ವಸ್ತುಗಳ ಒಂದು ವ್ಯವಸ್ಥೆಯಲ್ಲಿ ಅದರ ಸಮಗ್ರ ದ್ರವ್ಯರಾಶಿ ವರ್ತಿಸುತ್ತದೆ ಎಂದು ಭಾವಿಸಬಹುದಾದ ಒಂದು ಬಿಂದು (ಸೆಂಟರ್ ಆಫ್ ಮಾಸ್).  ಭೂಮಿಯ ಗುರುತ್ವದ ಪ್ರಭಾವದಲ್ಲಿರುವ ಕಾಯಗಳಿಗೆ ದ್ರವ್ಯರಾಶಿಕೇಂದ್ರವೂ ಗುರುತ್ವ ಕೇಂದ್ರವೂ ಒಂದೇ. 
 
ಪ್ಲವನಕೇಂದ್ರ : ದ್ರವ ಅಥವಾ ಅನಿಲ ಒಂದು ವಸ್ತುವಿಗೆ ಆಧಾರವಾಗಿ ಅದನ್ನು ಭರಿಸುವಾಗ ಆ ವಸ್ತು ಹೊರತಳ್ಳಿರುವ ದ್ರವದ ಅಥವಾ ಅನಿಲದ ಗುರುತ್ವ ಕೇಂದ್ರ (ಸೆಂಟರ್ ಆಫ್ ಬಾಯನ್ಸಿ).  

ವಕ್ರತಾಕೇಂದ್ರ : ಒಂದು ವಕ್ರ ರೇಖೆಯ ಮೇಲಿನ ಎರಡು ಅನುಕ್ರಮ ಬಿಂದುಗಳಲ್ಲಿ ಆ ವಕ್ರರೇಖೆಗೆ ಎಳೆದ ಅಭಿಲಂಭಗಳು ಸಂಧಿಸುವ ಬಿಂದು ವಕ್ರ ರೇಖೆಯ ಆ ಖಂಡದ ವಕ್ರತಾ ಕೇಂದ್ರ (ಸೆಂಟರ್ ಆಫ್ ಕರ್ವೇಚರ್).

ತೇಲುಕೇಂದ್ರ : ಒಂದು ಹಡಗದ ನೀರುಸಮತಳದ ಗುರುತ್ವ ಕೇಂದ್ರ (ಸೆಂಟರ್ ಆಫ್ ಪ್ಲೊಟೇಷನ್).  

ಚಲನಕೇಂದ್ರ : ಚಲಿಸುತ್ತಿರುವ ಒಂದು ವಸ್ತುವಿನಲ್ಲಿರುವ ಒಂದು ವಿರಾಮ ಬಿಂದು; ಉಳಿದ ಬಿಂದುಗಳು ಇದರ ಸುತ್ತಲೂ ಚಲಿಸುತ್ತಿರುವುವು (ಸೆಂಟರ್ ಆಫ್ ಮೋಷನ್).  

ಆಂದೋಳನಕೇಂದ್ರ : ಆಂದೋಳಿಸುತ್ತಿರುವ ಒಂದು ವಸ್ತುವಿನ ಆಂದೋಳನ ಕಾಲ ಬದಲಾಗದಂತೆ ಆ ವಸ್ತುವಿನ ಸಂಪೂರ್ಣ ದ್ರವ್ಯರಾಶಿಯನ್ನು ಕೇಂದ್ರೀಕರಿಸಬಹುದಾದ ಬಿಂದು (ಸೆಂಟರ್ ಆಫ್ ಆಸಿಲೇಷನ್).

ಸಮಾಂಗತಾಕೇಂದ್ರ : ಸಾಮಾನ್ಯವಾಗಿ ಒಂದು ಹರಳನ್ನು ಕುರಿತು ಬಳಸುವ  ಪದ.  ಹರಳಿನ ಒಂದು ಮುಖದಿಂದ ಸಮಾಂಗತಾಕೇಂದ್ರದ (ಸೆಂಟರ್ ಆಫ್ ಸಿಮಿಟ್ರಿ) ಮೂಲಕ ಎಳೆದ ಎಲ್ಲಾ ಸರಳ ರೇಖೆಗಳನ್ನೂ ಈ ಕೇಂದ್ರ ಸಮದ್ವಿಭಾಗಿಸುತ್ತದೆ.  ಹರಳಿನ ಒಂದು ಮುಖದಲ್ಲಿರುವ ಯಾವುದೇ ಬಿಂದುವಿಗೆ ಸಂವಾದಿಯಾಗಿ ಇನ್ನೊಂದು ಮುಖದಲ್ಲಿ ಈ ಕೇಂದ್ರದಿಂದ ಸಮದೂರದಲ್ಲಿ ಮತ್ತು ಇದನ್ನು ಕುರಿತು ಅದೇ ಸ್ಥಾನದಲ್ಲಿ ಇನ್ನೊಂದು ಬಿಂದುವಿದೆ.